₹3.38 ಲಕ್ಷ ಮೌಲ್ಯದ ರಾಗಿ ಜಪ್ತಿ; ಅಂಗಡಿ ಮಾಲೀಕರ ವಿರುದ್ಧ ಪೊಲೀಸ್ ಪ್ರಕರಣ ದಾಖಲು
ಸವಣೂರು: ಪಟ್ಟಣದ ಭರಮಲಿಂಗೇಶ್ವರ ವೃತ್ತದ ಬಳಿಯ ಸುನೀಲ ಜಮಾದಾರ ಅವರ ಅಂಗಡಿಯಲ್ಲಿ ಪಡಿತರ ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಆರೋಪದ ಮೇರೆಗೆ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಕ್ಟೋಬರ್ 28ರಂದು ಸಂಜೆ ಈ ಘಟನೆಗೆ ಸಂಬಂಧಿಸಿದಂತೆ ಆಹಾರ ನಿರೀಕ್ಷಕ ದೇವೇಂದ್ರಗೌಡ ಮಲ್ಲಿಕಾರ್ಜುನಗೌಡ ಪಾಟೀಲ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಪ್ರಥಮ ಮಾಹಿತಿ ವರದಿಯ ಪ್ರಕಾರ, ಗಣೇಶಪ್ರಸಾದ ಚಿನ್ನಿಪ್ರಸಾದ ಜಮಾದಾರ ಅವರನ್ನು ಆರೋಪಿಯೆಂದು ಹೆಸರಿಸಲಾಗಿದೆ. ಅಂಗಡಿಯಲ್ಲಿ ಸಂಗ್ರಹಿಸಿಡಲಾಗಿದ್ದ ಒಟ್ಟು 6,930 ಕೆ.ಜಿ. ಪಡಿತರ ರಾಗಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ ₹3,38,111 ಎಂದು ತಿಳಿಸಲಾಗಿದೆ.
ಪರೀಕ್ಷೆಗಾಗಿ 10 ಕೆ.ಜಿ. ರಾಗಿಯ ಮಾದರಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗಿದೆ. ಈ ಸಂಬಂಧ ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 3 ಮತ್ತು 7 ಹಾಗೂ ಕರ್ನಾಟಕ ಅಗತ್ಯ ವಸ್ತುಗಳ (ಸಾರ್ವಜನಿಕ ವಿತರಣಾ ವ್ಯವಸ್ಥೆ) ಸಾರ್ವಜನಿಕ ನಿಯಂತ್ರಣ ಆದೇಶ 2016ರ ಕಲಂ 18ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸವಣೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 300/2026ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಸಂದರ್ಭದಲ್ಲಿ ಅನೀಲ ರಾಮಪ್ಪ ಬಿಳಗಿ, ಗಿರೀಶ ಮುದಗಲ್ಲ, ಎಂ.ಆರ್. ಈಶಾಪೂರ, ಪಿಎಸ್ಐ ರಂಗನಾಥ ಅಂತರಗಟ್ಟಿ ಹಾಗೂ ಎಎಸ್ಐ ಕೆ.ಎಂ. ನದಾಫ ಉಪಸ್ಥಿತರಿದ್ದರು.







