ಹಾವೇರಿ : ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಭೋದನಾ ಸಂಕೀರ್ಣ ಉಪಹಾರ ಮಂದಿರದಲ್ಲಿ ಗರ್ಭೀಣಿ ಮಹಿಳೆಗೆ ತೆಗೆದುಕೊಂಡು ಹೋಗಿದ್ದ ಶಿರಾ ಉಪ್ಪಿಟಿನಲ್ಲಿ ಸತ್ತ ಹಲ್ಲಿ ಪತ್ತೆಯಾಗಿರುವುದು ಇತ್ತಿಚೇಗೆ ಕಂಡು ಬಂದಿದ್ದು, ಉಪಹಾರ ಸೇವಿಸುತ್ತಿದ್ದ ರೋಗಿಗಳು ಹಾಗೂ ಅವರ ಸಂಬಧಿಕರು ಆತಂಕಕ್ಕೀಡಾಗಿದ್ದಾರೆ. ಹಾವೇರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರು ಇರುವ ಉಪಹಾರ ಮಂದಿರದಲ್ಲಿ ಈ ಘಟನೆ ನಡೆದಿದೆ. ಗರ್ಭಿಣಿ ಮಹಿಳೆಗೆ ಕುಟುಂಬದವರು ಬೆಳಗಿನ ಉಪಹಾರವಾಗಿ ಶಿರಾ ಉಪ್ಪಿಟ ಪಾರ್ಸಲ್ ತೆಗೆದುಕೊಂಡು ಹೋಗಿದ್ದಾರೆ. ಪಾರ್ಸಲ್ ಬಿಚ್ಚಿ ತಿನ್ನಲು ಮುಂದಾದಾಗ ಹಲ್ಲಿಯ ತುಂಡುಗಳು ಕಂಡು ಬಂದಿವೆ. ತಕ್ಷಣ ಸಂಬಂಧಿಕರು ಉಪ್ಪಿಟಿನೊಂದಿಗೆ ಉಪಹಾರ ಕೇಂದ್ರಕ್ಕೆ ತೆರಳಿ ಗಲಾಟೆ ಮಾಡಿದ್ದಾರೆ. ಇನ್ನೂ ಆಸ್ಪತ್ರೆಗೆ ಬಂದ ಜನರು ಉಪಹಾರ ಕೇಂದ್ರದ ಎದುರು ಜಮಾಯಿಸಿ, ವಾಗ್ವಾದ ಮಾಡಿದ್ದಾರೆ. ಸಾರ್ವಜನಿಕರ ಆರೋಗ್ಯ ಕಾಪಾಡಬೇಕಾದವರೇ ನಿರ್ಲಕ್ಷ್ಯ ತೊರಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಉಪಹಾರದ ಒಳಗೆ ಪ್ರವೇಶಿಸಿ ಜನರು ಆಹಾರವನ್ನು ಪರಿಶೀಲಿಸಿದಾಗ ಜಿರಳೆಗಳು ಸಹ ಆಹಾರದಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ. ಕ್ಯಾಂಟೀನ್ನಲ್ಲಿ ಸಮರ್ಪಕ ಸ್ವಚ್ಛತೆ ಕಾಯ್ದುಕೊಳ್ಳುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಕ್ಯಾಂಟೀನಗೆ ಬೀಗ : ಬಾಣಂತಿಯರು ಹಾಗೂ ರೋಗಿಗಳಿಗೆ ನೀಡುವ ಆಹಾರದಲ್ಲಿ ಇಂತಹ ನಿರ್ಲಕ್ಷ್ಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕ್ಯಾಂಟೀನ್ಗೆ ಬೀಗ ಹಾಕಲಾಗಿದೆ. ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಾಣಂತಿಯರು ಹಾಗೂ ನವಜಾತ ಶಿಶುಗಳ ಆರೋಗ್ಯದ ದೃಷ್ಟಿಯಿಂದ ಆಹಾರ ತಯಾರಿಕೆ, ಸಂಗ್ರಹಣೆ ಮತ್ತು ವಿತರಣೆಯಲ್ಲಿ ಕಟ್ಟುನಿಟ್ಟಿನ ಸ್ವಚ್ಛತಾ ಕ್ರಮಗಳನ್ನು ಪಾಲಿಸಬೇಕು. ಆದರೆ ಕ್ಯಾಂಟೀನ್ನಲ್ಲಿ ಹಲ್ಲಿ ಹಾಗೂ ಜಿರಳೆಗಳು ಪತ್ತೆಯಾಗಿರುವುದು ಅಧಿಕಾರಿಗಳ ಮೇಲ್ವಿಚಾರಣೆ ಮತ್ತು ಆಹಾರ ಗುಣಮಟ್ಟದ ಪರಿಶೀಲನೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.