ಬಂಕಾಪುರ: ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ತೆರಳಿ ಕುಳಿತಿದ್ದ ಏಳು ವರ್ಷದ ಬಾಲಕ ಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ಇಂದು(ಶನಿವಾರ )ಮಧ್ಯಾಹ್ನ ನಡೆದಿದೆ.
ಮೃತ ಬಾಲಕನನ್ನು ಸಮೀರ ಮುಲ್ಲಾ (7) ಎಂದು ಗುರುತಿಸಲಾಗಿದೆ.
ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿನ ಬಾಗಿಲು ತೆರೆದು ಬಾಲಕ ಒಳಗೆ ಕುಳಿತಿದ್ದ ಎನ್ನಲಾಗಿದೆ. ಬಳಿಕ ಮನೆಯವರ ಗಮನಕ್ಕೆ ಬಾರದೆ ಕಾರಿನೊಳಗೇ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದ್ದಾನೆ.
ಬಾಲಕ ಕಾಣದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದ್ದು, ಕೆಲ ಗಂಟೆಗಳ ಬಳಿಕ ಕಾರಿನೊಳಗೆ ಬಾಲಕ ಇರುವುದನ್ನು ಪತ್ತೆಹಚ್ಚಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಾರ್ಗಮಧ್ಯೆಯೇ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯಂತೆ ಬಾಲಕನಿಗೆ ತೀವ್ರ ಜ್ವರ ಇದ್ದು, ಅದರಿಂದಲೇ ಮೃತಪಟ್ಟಿರಬಹುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಘಟನೆ ಬಂಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

