ಹಾವೇರಿ : ಕಬ್ಬಿನ ಬೆಲೆ ನಿಗದಿಗಾಗಿ ರೈತರು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರವು ಸಹ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮುಂದುವರಿಸಿದ್ದಾರೆ. ಬಂಕಾಪುರ ಟೋಲ್ ಬಳಿ ಟೆಂಟ್ ಹಾಕುವ ಮೂಲಕ ಮಂಗಳವಾರ ಬೆಳಿಗ್ಗೆಯಿಂದಲೇ ಪ್ರತಿಭಟನೆಯನ್ನು ಕೈಗೊಂಡಿದ್ದು ಅಹೋರಾತ್ರಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಅಹೋ ರಾತ್ರಿ ಸಾವಿರಾರು ರೈತರು ಹೆದ್ದಾರಿಯಲ್ಲಿ ಕುಳಿತು ಭಜನೆ ನಡೆಸುವ ಮೂಲಕ ಬೃಹತ್ ಪ್ರತಿಭಟನೆಯನ್ನು ನಡೆಸಿದರು. ಅಲ್ಲದೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿದರು. ರಸ್ತೆಯಲ್ಲಿ ಮಲಗಿದ ರೈತರು : ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ರಾಷ್ಟ್ರೀಯ ಹೆದ್ದಾರಿಯಲ್ಲೇ ಅಡುಗೆ ಮಾಡಿ ಊಟ ಸೇವಿಸಿ ರಸ್ತೆಯಲ್ಲಿ ಮಲಗಿರುವ ದೃಶ್ಯಗಳು ಮನಕಲುಕುವಂತಿದ್ದವು. ಅಲ್ಲದೆ ರಾತ್ರಿಯಿಡಿ ರೖೆತ ಗೀತೆಗಳು ಮೊಳಗಿದವು. ಕಳೆದ ಎರಡು ದಿನಗಳಿಂದ ಸಾವಿರಾರು ರೈತರು ರಸ್ತೆಯಲ್ಲಿ ಜೀವನ ನಡೆಸುವಂತಹ ದೃಶ್ಯಗಳು ಕಂಡುಬಂದರೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪ್ರತಿನಿಧಿಗಳು ಇತ್ತ ಗಮನಹರಿಸದೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ಇರುವುದು ರೈತ ವಿರೋಧಿ ಸರ್ಕಾರ ಎಂಬುದು ಸಾಬೀತಾಗಿದೆ ಎಂದು ರೈತ ಮುಖಂಡರು ಕಿಡಿ ಕಾರಿದರು. ನಾಯಕರ ಭೇಟಿ ಸಾಧ್ಯತೆ : ಕಳೆದ ಎರಡು ದಿನಗಳಿಂದ ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು ಸಹ ಯಾವ ಪಕ್ಷದ ನಾಯಕರು ಸಹ ಭೇಟಿ ನೀಡಿಲ್ಲ. ಬುಧುವಾರ ವಿವಿಧ ಪಕ್ಷದ ನಾಯಕರು ಭೇಟಿ ನೀಡುವ ಸಾಧ್ಯತೆಗಳಿವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.