ಖಾಸಗಿ ವಾಹನಗಳಿಗೆ ದಂಡ ವಿಧಿಸುವ ಅಧಿಕಾರಿಗಳು ಸರ್ಕಾರಿ ಬಸ್ಗಳ ಹೊಗೆ ತಪಾಸಣೆ ಮಾಡುವುದಿಲ್ಲವೇ?
ಹಾವೇರಿ: ವಾಯುಮಾಲಿನ್ಯ ತಡೆಗಟ್ಟಲು ಸರ್ಕಾರಗಳು ಹತ್ತಾರು ಯೋಜನೆಗಳನ್ನು ರೂಪಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಸರ್ಕಾರದ ಅಧೀನದಲ್ಲಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಲವು ಬಸ್ಗಳು ಕಪ್ಪು ಮೋಡದಂತೆ ಹೊಗೆ ಉಗುಳುತ್ತಾ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸವಣೂರು, ಗದಗ ಹಾಗೂ ಹಾವೇರಿ ಸಾರಿಗೆ ಘಟಕಗಳಿಗೆ ಸೇರಿದ ಕೆಲವು ಬಸ್ಗಳಿಂದ ಅತಿಯಾದ ಕಪ್ಪು ಹೊಗೆ ಹೊರಬರುತ್ತಿರುವುದು ಕಂಡುಬರುತ್ತಿದೆ. ವಾಹನಗಳಿಂದ ಹೊರಸೂಸುವ ಹೊಗೆಯನ್ನು ನಿಯಂತ್ರಿಸುವುದು ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಆದರೆ, ಸರ್ಕಾರಿ ಸಾರಿಗೆ ಬಸ್ಗಳೇ ನಿಯಮ ಉಲ್ಲಂಘಿಸುವ ರೀತಿಯಲ್ಲಿ ಹೊಗೆ ಉಗುಳುತ್ತಿದ್ದರೆ ಸಾರ್ವಜನಿಕರಿಗೆ ಯಾವ ಸಂದೇಶ ನೀಡಿದಂತಾಗುತ್ತದೆ ಎಂಬ ಪ್ರಶ್ನೆ ಎದುರಾಗಿದೆ.
ಖಾಸಗಿ ವಾಹನಗಳ ತಪಾಸಣೆ ನಡೆಸುವ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್ಟಿಒ) ಅಧಿಕಾರಿಗಳು, ವಾಯುಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಇಲ್ಲದ ವಾಹನಗಳ ಚಾಲಕರಿಗೆ ದಂಡ ವಿಧಿಸುತ್ತಾರೆ. ವಾಹನಗಳ ಹೊಗೆ ಪ್ರಮಾಣ ನಿಗದಿತ ಮಿತಿಯನ್ನು ಮೀರಿದರೆ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಆದರೆ, ಅತಿಯಾದ ಕಪ್ಪು ಹೊಗೆ ಉಗುಳುವ ಸರ್ಕಾರಿ ಸಾರಿಗೆ ಬಸ್ಗಳ ತಪಾಸಣೆ ನಡೆಸುವವರು ಯಾರು? ಅವುಗಳ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಸರ್ಕಾರಿ ವಾಹನಗಳಿಗೂ ಪರಿಸರ ಮಾಲಿನ್ಯ ನಿಯಮಗಳು ಅನ್ವಯವಾಗುವುದಿಲ್ಲವೇ? ಸಾರ್ವಜನಿಕರಿಗೆ ನಿಯಮ ಪಾಲಿಸುವಂತೆ ಸೂಚಿಸುವ ಅಧಿಕಾರಿಗಳು ಮೊದಲು ಸರ್ಕಾರಿ ವಾಹನಗಳ ಸ್ಥಿತಿಗತಿಗಳತ್ತ ಗಮನಹರಿಸಬೇಕಲ್ಲವೇ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸಂಬಂಧಪಟ್ಟ ಸಾರಿಗೆ ಘಟಕಗಳ ಅಧಿಕಾರಿಗಳು ತಕ್ಷಣವೇ ಇಂತಹ ಬಸ್ಗಳ ತಾಂತ್ರಿಕ ಸ್ಥಿತಿಯನ್ನು ಪರಿಶೀಲಿಸಿ, ಅಗತ್ಯ ದುರಸ್ತಿ ಕೈಗೊಳ್ಳಬೇಕು. ಆರ್ಟಿಒ ಅಧಿಕಾರಿಗಳು ಕೂಡ ಸರ್ಕಾರಿ ಹಾಗೂ ಖಾಸಗಿ ವಾಹನಗಳೆಂಬ ಭೇದವಿಲ್ಲದೆ ನಿಯಮಾನುಸಾರ ತಪಾಸಣೆ ನಡೆಸಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.









