ಮೂರು ಗಂಟೆಯಾದರೂ ಸ್ಥಳಕ್ಕೆ ಬಾರದ ಆಂಬುಲೆನ್ಸ್; ಸ್ಥಳೀಯರ ಆಕ್ರೋಶ
ಹಾವೇರಿ: ವಿಜಯದಶಮಿಯ ದಿನದಂದೇ ಮನಕಲಕುವ ದುರಂತ ಸಂಭವಿಸಿದ್ದು, ಕೆರೆಯಲ್ಲಿ ಮುಳುಗಿ ಕುರಿಗಾಯಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆ ಗ್ರಾಮದ ದೊಡ್ಡ ಕೆರೆಯಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ನಿವಾಸಿ ಸಂತೋಷ್ ಪರಸಪ್ಪ ಮತ್ತೂರ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕುರಿ ಮೇಯಿಸುತ್ತಾ ಹಾವೇರಿ ಜಿಲ್ಲೆಯತ್ತ ಆಗಮಿಸಿದ್ದ ಅವರು, ಬುಧವಾರ ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆಗೆ ಕುರಿಗಳಿಗೆ ನೀರು ಕುಡಿಸಲು ಕೆರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯರಲ್ಲಿಯೂ ದುಃಖದ ವಾತಾವರಣ ನಿರ್ಮಾಣವಾಗಿದೆ.

ಮೂರು ಗಂಟೆಯಾದರೂ ಬಾರದ ಆಂಬುಲೆನ್ಸ್!
ಕುರಿಗಾಯಿ ಕೆರೆಯಲ್ಲಿ ಮುಳುಗಿದ ತಕ್ಷಣ ಆಂಬುಲೆನ್ಸ್ಗೆ ಕರೆ ಮಾಡಿದ್ದರೂ, ಮೂರು ಗಂಟೆಗಳಾದರೂ ಆಂಬುಲೆನ್ಸ್ ಸ್ಥಳಕ್ಕೆ ಆಗಮಿಸಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬಳಿಕ ಮೃತದೇಹವನ್ನು ಟಾಟಾ ಏಸ್ ವಾಹನದಲ್ಲಿ ಸಾಗಿಸಲಾಗಿದೆ ಎನ್ನಲಾಗಿದೆ.
ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸೇವೆ ಸಮಯಕ್ಕೆ ಸರಿಯಾಗಿ ಲಭ್ಯವಾಗದಿರುವ ಕುರಿತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಗೆ ತುರ್ತು ಆರೋಗ್ಯ ಸೇವೆ ಒದಗಿಸುವಲ್ಲಿ ವಿಳಂಬವಾಗಿದ್ದರೆ, ಅದಕ್ಕೆ ಕಾರಣವೇನು ಎಂಬ ಪ್ರಶ್ನೆಯೂ ಎದ್ದಿದೆ.
ಶಾಸಕ ಬಸವರಾಜ ಶಿವಣ್ಣನವರ ಪ್ರತಿನಿಧಿಸುವ ಕ್ಷೇತ್ರದಲ್ಲಿ ಇಂತಹ ತುರ್ತು ಸೇವೆಯ ಸಮಸ್ಯೆ ಎದುರಾಗಿದೆಯೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಆಂಬುಲೆನ್ಸ್ ತಡವಾಗಿ ಬಂದಿರುವ ಆರೋಪದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸ್ಪಷ್ಟನೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.









