ಮಂಡ್ಯ : ನಿಯಂತ್ರಣ ತಪ್ಪಿದ ಕಾರೊಂದು ಪ್ಲೇ ಓವರ್ ನಿಂದ ಅಂಡರ್ ಪಾಸ್ ಕೆಳಗೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಉಮ್ಮಡಹಳ್ಳಿ ಗೇಟ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ. ಬೆಂಗಳೂರಿನ ಅಂಜನ(23) ಮೃತ ಪಟ್ಟ ಮಹಿಳೆ.ಕಾರಿನಲ್ಲಿದ್ದ ಮೃತ ಮಹಿಳೆ ಪತಿ ಹರೀಶ್ ಹಾಗೂ ಆತನ ಸ್ನೇಹಿತ ನಿತಿನ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ವೇಳೆ ದುರ್ಘಟನೆ ಸಂಭವಿಸಿದೆ. ಈ ದಂಪತಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಸಾಫ್ಟ್ವೇರ್ ಕಂಪನಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಅಂಜನಾ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುತ್ತಿದ್ದರು. ಮೇಲಿಂದ ಕಾರು ಬೀಳುವಾಗ ಕಾರಿನ ವಿಂಡೋ ತೆರೆದುಕೊಂಡು ಅಂಜನಾ ಕೆಳಗೆ ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.