ಸತತ 9ನೇ ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾದ ಓಂ ಪ್ರಕಾಶ್ ಅಂಗಡಿ
ಹಾವೇರಿ: ಕರ್ನಾಟಕದ ಗತವೈಭವವನ್ನು ನೆನಪಿಸುವ, ನಾಡಿನ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವ ಹೆಮ್ಮೆಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಬಂಕಾಪುರದ ಯುವಕನೊಬ್ಬ ಸತತ 9ನೇ ಬಾರಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾನೆ.ಹೌದು, ಇಂದಿನ ಆಧುನಿಕ ಯುಗದಲ್ಲಿ ಅನೇಕ ಯುವಕ-ಯುವತಿಯರು ಪಾಶ್ಚಾತ್ಯ ಸಂಸ್ಕೃತಿಯತ್ತ ಆಕರ್ಷಿತರಾಗುತ್ತಿರುವ ಸಂದರ್ಭದಲ್ಲಿ, ನಮ್ಮ ನಾಡಿನ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿರುವ ಯುವಕನ ಸಾಧನೆ ಮೆಚ್ಚುಗೆಗೆ ಪಾತ್ರವಾಗಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ನಗರದ ಓಂ ಪ್ರಕಾಶ್ ಕರಬಸಪ್ಪಾ ಅಂಗಡಿ ಅವರು ಪುರವಂತಿಕೆ, ದೊಡ್ಡಾಟ ಹಾಗೂ ಸಮ್ಮಾಳ ವಾದ್ಯಗಳನ್ನು ನುಡಿಸುವ ಮೂಲಕ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುತ್ತಿದ್ದಾರೆ. ಮೈಸೂರು ದಸರಾ ಮಹೋತ್ಸವದಲ್ಲಿ ಸತತ ಒಂಬತ್ತನೇ ಬಾರಿ ಭಾಗವಹಿಸಿರುವುದು ಅವರ ಕಲಾಶಕ್ತಿಗೆ, ಪರಿಶ್ರಮಕ್ಕೆ ಹಾಗೂ ಜನಪದ ಕಲೆಯ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿದೆ.
ನಮ್ಮ ನಾಡಿನ ಜನಪದ ಕಲೆಗಳು ಕೇವಲ ಮನರಂಜನೆಯ ಸಾಧನಗಳಲ್ಲ, ಅವು ನಮ್ಮ ಇತಿಹಾಸ, ಸಂಪ್ರದಾಯ, ಜೀವನಶೈಲಿ ಮತ್ತು ಸಾಂಸ್ಕೃತಿಕ ಗುರುತಿನ ಪ್ರತಿಬಿಂಬವಾಗಿವೆ. ಇಂತಹ ಕಲೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ ಅವುಗಳ ನಿರಂತರತೆಗೆ ಶ್ರಮಿಸುವ ಕಲಾವಿದರ ಕೊಡುಗೆ ಮಹತ್ವದ್ದಾಗಿದೆ.
ಆಧುನಿಕತೆಯ ಭರಾಟೆಯಲ್ಲಿಯೂ ಪಾರಂಪರಿಕ ಕಲೆಯನ್ನು ಮೈಗೂಡಿಸಿಕೊಂಡು, ರಾಜ್ಯದ ಪ್ರಮುಖ ಸಾಂಸ್ಕೃತಿಕ ವೇದಿಕೆಯಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವ ಓಂ ಪ್ರಕಾಶ್ ಅಂಗಡಿ ಅವರ ಸಾಧನೆ ಬಂಕಾಪುರ ನಗರ ಹಾಗೂ ಹಾವೇರಿ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.

1) 2018 ಬೆಂಗಳೂರನಲ್ಲಿ ಕರ್ನಾಟಕದ ನೆಲ ಜಲ ಭಾಷೆ ಸಾಂಸ್ಕೃತಿಕ ಹಬ್ಬದಲ್ಲಿ “ಕರ್ನಾಟಕದ ಕಲಾ ಮಯೂರ" ರಾಜ್ಯ ಪ್ರಶಸ್ತಿ,
2) 2018ರ ಮೈಸೂರಿನಲ್ಲಿ ಕಾವೇರಿ ಕರ್ನಾಟಕ ಸಾಂಸ್ಕೃತಿಕ ಹಬ್ಬದಲ್ಲಿ "ವಿಶ್ವೇಶ್ವರಯ್ಯ ಪ್ರಶಸ್ತಿ" ರಾಜ್ಯ ಪ್ರಶಸ್ತಿ,
3) 2019ರ ಉತ್ತರ ಕರ್ನಾಟಕ ಕಲಾವಿದರ ಸಂಘದಿಂದ ಕರ್ನಾಟಕ ರಾಜ್ಯ "ಸೇವಾ ಕಿರಣ" ಪ್ರಶಸ್ತಿ,
4) 2020ರ ಬೆಂಗಳೂರಿನಲ್ಲಿ ವೀರಶೈವ ಲಿಂಗಾಯಿತ ವೇದಿಕೆ "ವೀರಗಾಸೆ ಯುವರತ್ನ" ಪ್ರಶಸ್ತಿ
ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಬಾಲ್ಯದಿಂದಲೇ ಪುರವಂತಿಕೆ : ಓಂಪ್ರಕಾಶ ಯುವಕ ನಾರಾಯಣಪುರ ಗ್ರಾಮದ ಹಿರಿಯರಾದ ವೀರಪ್ಪಾ ಮತ್ತಿಗಟ್ಟಿ ಹಾಗೂ ಶ್ರೀಯುತ ವೀರಭದ್ರಪ್ಪಾ ರಾ ಅಂಗಡಿಯವರ ಆಶ್ರಯದಲ್ಲಿ 10 ನೇ ವಯಸ್ಸಿನಿಂದಲೂ ವೀರಗಾಸೆ ಪುರವಂತಿಕೆ ಕಲಿತಿದ್ದು, ಸತತ 21 ವರ್ಷಗಳಿಂದ ಸುಧೀರ್ಘವಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಬಾಲ್ಯದಿಂದಲೂ ಬಂಕಾಪುರ, ಶಿಗ್ಗಾಂವದಲ್ಲಿ ಶಿಕ್ಷಣ ಮೂಗಿಸಿದ ಓಂಪ್ರಕಾಶ, ತನ್ನದೆಯಾದ ಶ್ರೀ ವೀರಭದ್ರೇಶ್ವರ ಪುರವಂತಿಕೆ ಕಲಾ ತಂಡ ರಚಿಸಿ, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿ ಗಮನ ಸೆಳೆದಿದ್ದಾರೆ.

ಏನಿದು ವೀರಗಾಸೆ ಪುರವಂತಿಕೆ? : ವೀರಗಾಸೆ ಪುರವಂತಿಕೆ ವೀರಶೈವ ಲಿಂಗಾಯತ ಸಂಪ್ರದಾಯದ ಧಾರ್ಮಿಕವಾದ ವೀರ ನೃತ್ಯ ಸಾಮೂಹಿಕ ನೃತ್ಯವನ್ನು ಒಳಗೊಂಡ ಕರ್ನಾಟಕದ ಜನಪದ ಕಲೆ ಇದರಲ್ಲಿ ಹತ್ತರಿಂದ ಇಪ್ಪತ್ತು ಮಂದಿಯ ವರೆಗೊ ಭಾಗವಹಿಸುತ್ತಾರೆ. ಪಂಚವಾಧ್ಯಗಳಾದ ತಾಳ, ಶೃತಿ, ಸಮ್ಮಾಳ, ಓಲಗ, ಕರಡಿ ಬಳಕೆಯಾಗುತ್ತದೆ. ಸಮ್ಮಾಳ ಬಾರಿಸುವುದು ಅನಿವಾರ್ಯವಾಗಿದೆ. ವೀರಗಾಸೆ ಪುರವಂತಿಕೆಯವರ ವೇಷ ಭೂಷಣ ವಿಶೇಷವಾಗಿರುತ್ತದೆ. ನೀಲಿ ಬಣ್ಣದ ವೀರಗಚ್ಚೆ ಕೇಸರಿ ಬಣ್ಣದ ಕಸೆ ಅಂಗಿ ಗುಲಾಬಿ ಬಣ್ಣದ ರುಮಾಲು ಕೊರಳಲ್ಲಿ ರುದ್ರಾಕ್ಷಿ ಸರ ಹಣೆಗೆ ವಿಭೂತಿ ಕರ್ಣಕುಂಡಲ ಸೊಂಟಪಟ್ಟಿ ಬಿಚ್ಚುಗತ್ತಿ ಕಾಲ್ಲೆಜ್ಜೆ ಧರಿಸುತ್ತಾರೆ ಅಹಾಹಾ... ರುದ್ರಾ ಆಹಾಹಾ... ವೀರ ಎಂದು ವೀರಗಾಸೆ ಪುರವಂತಿಕೆಯ ನರ್ತಕ ಹೇಳುವ ವಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ. ಈ ಕುಣಿತದಲ್ಲಿ ವೀರಭದ್ರ ಹುಟ್ಟಿದ ಸಂಧರ್ಭವನ್ನು ವರ್ಣನೆಯನ್ನು ವಡಪು ಹೇಳುವುದರೊಂದಿಗೆ ವಿವರಿಸಲಾಗುತ್ತದೆ.
ಒಟ್ಟಾರೆ ಜಾನಪದ ಪುರುವಂತಿಕೆ ಮೊದಲು ಸಣ್ಣ ಕಾರ್ಯಕ್ರಮಗಳಾದ ಮದುವೆ, ಮನೆ ಪೂಜಾ ವೇಳೆ ಕಾಣಬಹುದಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರದಲ್ಲಿ ಮತ್ತೆ ಜಾನಪದ ಕಲೆಗಳು ಬೆಳಕಿಗೆ ಬರುವ ಮೂಕ ಪ್ರೋತ್ಸಾಹಿಸುವ ಕೆಲಸಗಳು ಆಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ.


